Monday, December 21, 2009

ಮೆಜಸ್ಟಿಕ್ nights....













ಅದೆಲ್ಲಿಂದ ಬರುತ್ತಿದ್ದಾರೆ, ಅದೆಲ್ಲಿಗೆ ಹೋಗುತ್ತಿದ್ದಾರೆ
ಬಗ್ಗಿಸಿದ ತಲೆಯನ್ನು ಎತ್ತದೆ ನಡೆಯುತ್ತಿದ್ದಾರೆ
ಮುಗುಳು ನಗುವುದನ್ನೇ ಮರೆತಿದ್ದಾರೆ
ದೃಷ್ಟಿಯು ಮನಸ್ಸಿನಾಳದಲ್ಲೇ ಇಂಗಿಹೋಗಿದೆ,
ಕಣ್ಣುಗಳಿಂದ ಬರಿದೇ ನೋಡುತ್ತಿದ್ದಾರೆ.

( ಮೋಡ ಕಾಣುತ್ತಿಲ್ಲ, ಕತ್ತಲೋಳಗಿಂದ ಮಳೆ ಬೀಳುತ್ತಿದೆ )

ಮೈ ಸುಟ್ಟುಕೊಂಡು, ಕೈ ಮುರುಟಿಕೊಂಡು
ಮಲಗಿದ್ದಾನೆ, ಹಾದುಹೋಗುತ್ತಿರುವ ಕಾಲುಗಳನ್ನು ಎಣಿಸುತ್ತ...
ಮಳೆಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜನ
ಚಿಲ್ಲರೆ ಎಸೆಯುವುದನ್ನು ಮರೆತಿದ್ದಾರೆ.
ಹುಡುಗಿಯೊಬ್ಬಳು ಗೆಳೆಯನ ಕೈಯನ್ನು ಗಟ್ಟಿಯಾಗಿ
ಹಿಡಿದು ನಡೆಯುತ್ತಿದ್ದಾಳೆ....... ಚಳಿ ಕೆಲಸ ಮಾಡುತ್ತಿದೆ.
ಇನ್ನು ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಬೇರೆ ಬೇರೆ
ಬಸ್ಸಿನಲ್ಲಿರುತ್ತಾರೆ.
'ಸೀಟ್ ಸಿಕ್ತಾ?' ಎಂದು ಇವನು ಮೆಸೇಜ್ ಕಳಿಸಿರುತ್ತಾನೆ.

"ಬರೀ ಎಪ್ಪತ್.. ಬರೀ ಎಪ್ಪತ್", " ಹತ್ರುಪಾಯ್ಗೆ ಮೂರ್"
ಕೂಗುತ್ತಿದ್ದಾರೆ..... ಕೂಗುವುದಷ್ಟೇ ತಮ್ಮ ಕೆಲಸವೆಂಬಂತೆ.
ಅಲ್ಲೋಬಳು ಕೂಗದೆ ವ್ಯಾಪಾರ ಮುಗಿಸಿದ್ದಾಳೆ.
ಕಲರ್ ಕಲರ್ ಕನ್ನಡಕ, ತನ್ನ ಬಾಲ ಮೂಸುತ್ತ ತಿರುಗುವ ಆಟಿಕೆ ರೈಲು
ಸಾಕ್ಸು, ಕರ್ಚೀಪು, ದೇಹ, ಹಸಿವು...... ಎಲ್ಲವೂ ಮಾರಾಟವಾಗುತ್ತಿದೆ.

ಬುಸುಗುಡುತ್ತ ಬಸ್ಸೊಂದು ಧಾವಿಸುತ್ತಿದೆ,
ಪ್ಲಾಟ್ ಫಾರ್ಮ್ನಲ್ಲಿ ವಿದ್ಯುತ್ ಸಂಚಾರ.....
ಆಳದಲ್ಲೆಲ್ಲೋ ಕಳೆದುಹೊಗಿದ್ದವರಿಗೆ ಈಗ ಚಲನೆ ಬಂದಿದೆ
ಜೀವದ ಹಂಗು ತೊರೆದು ಬಸ್ಸಿಗೆದುರಾಗಿ ಓಡುತ್ತಿದ್ದಾರೆ...
"ನಾಳೆಯನ್ನು ಕಂಡವರ್ಯಾರು, ಈಗ ಸೀಟು ಸಿಕ್ಕರೆ ಅಷ್ಟೇ ಸಾಕು".

ಹತ್ತಿಸಿಕೊಂಡು ಹೋದ ಬಸ್ಸಿನ ಹಿಂದೆಯೇ
ಮತ್ತೊಂದು ಬಂದು ಇಳಿಸಿ ನಿಂತಿದೆ.
ಒಡಲು ತುಂಬಿದೊಡನೆ ಮತ್ತೆ ಓಟ ಶುರು.....
ಇಲ್ಯಾರು ತಂಗುವುದಿಲ್ಲ,
ಮೆಜಸ್ಟಿಕ್ ಮಲಗುವುದಿಲ್ಲ.


Saturday, December 12, 2009

ಹನಿಗಳ ಲೀಲೆ....


Friday, December 11, 2009

ಕರೆಂಟ್ ಹೋಗಿತ್ತು / ನಿದ್ದೆ ಬರ್ತಿರ್ಲಿಲ್ಲ / ಫೋಟೋಸ್ ಹೇಗಿವೆ?


ಭೂಮಿನ್ ತಬ್ಬಿದ್ ಮೋಡಿದ್ದಂಗೆ...ಮಡಿಕೇರಿಲಿ ಮಂಜು.



ಬೆಂಗಳೂರಿಂದ ಮಡಿಕೇರಿಗೆ .

ಬೆಂಗಳೂರು-ನಾಗರಹೊಳೆ-ಹುಣುಸೂರು ( ಹುನುಸೂರಿಂದ 10 km ದೂರದಲ್ಲಿದ್ದ lodge ನಲ್ಲಿ ರಾತ್ರಿ halt)
ನಂತರ.....
ಮುಂಜಾನೆಯ ಮಂಜಿನಲ್ಲಿ ಬೈಕ್ ನುಗ್ಗಿಸಿಕೊಂಡು ಕುಶಾಲನಗರಕ್ಕೆ.......ಅಲ್ಲಿ ತಿಂಡಿ ಮುಗಿಸಿಕೊಳ್ಳುವಷ್ಟರಲ್ಲಿ ಸ್ವಲ್ಪ ಬಿಸಿಲು.
ಅಲ್ಲಿಂದ ' ಅಬ್ಬಿ ಜಲಪಾತ'- ಮಡಿಕೇರಿಯ ಬೀದಿಗಳಲ್ಲಿ ಒಂದು ರೌಂಡ್(licence ಇಲ್ಲದೆ ಇದ್ದಿದ್ದಕ್ಕೆ ಮಡಿಕೇರಿಯ ಪೊಲೀಸರಿಗೆ ಕೈ ಬಿಸಿ ಮಾಡಬೇಕಾಯಿತು) - ಅಲ್ಲಿಂದ ಮತ್ತೆ ಕುಶಾಲನಗರಕ್ಕೆ ಬಂದು ಮಧ್ಯಾನದ ಊಟ. ನಂತರ ಅಲ್ಲಿಯ ನಿಸರ್ಗಧಾಮಕ್ಕೆ ಭೇಟಿ. ಹೊಳೆಯಲ್ಲಿ ಮಿಂದು, ಸ್ವಲ್ಪ ವಿರಮಿಸುವಷ್ಟರಲ್ಲೇ ಸಂಜೆ. ಸುಮಾರು 5 ಗಂಟೆಗೆ ಕುಶಾಲನಗರ ಬಿಟ್ಟು ರಾತ್ರಿ ಹನ್ನೊಂದಕ್ಕೆಲ್ಲ ಮತ್ತೆ ಬೆಂಗಳೂರಿನ ಕಾಲ ಬಳಿ.

ಎರಡು ದಿನ-ಒಂದು ರಾತ್ರಿ-ಆರುನೂರು ಕಿಲೋಮೀಟರು-ಎರಡು ಬೈಕ್ ಗಳು-ನಾಲ್ಕು ಜನ........................... ನಿಜ ಹೇಳಬೇಕೆಂದರೆ, ರಾತ್ರಿ ರೂಮಿಗೆ ವಾಪಸ್ ಬರುವಷ್ಟರಲ್ಲೇ ನಮ್ಮ 'seat' ಗಳು ಸ್ಪರ್ಶ ಜ್ಞಾನವನ್ನೇ ಕಳೆದುಕೊಂಡು ಬಿಟ್ಟಿದ್ದವು. ಮಲಗಿದವರು ಎರಡು ದಿನ ಎದ್ದಿದ್ರೆ ಕೇಳ್ರಿ.........