Monday, December 21, 2009

ಮೆಜಸ್ಟಿಕ್ nights....













ಅದೆಲ್ಲಿಂದ ಬರುತ್ತಿದ್ದಾರೆ, ಅದೆಲ್ಲಿಗೆ ಹೋಗುತ್ತಿದ್ದಾರೆ
ಬಗ್ಗಿಸಿದ ತಲೆಯನ್ನು ಎತ್ತದೆ ನಡೆಯುತ್ತಿದ್ದಾರೆ
ಮುಗುಳು ನಗುವುದನ್ನೇ ಮರೆತಿದ್ದಾರೆ
ದೃಷ್ಟಿಯು ಮನಸ್ಸಿನಾಳದಲ್ಲೇ ಇಂಗಿಹೋಗಿದೆ,
ಕಣ್ಣುಗಳಿಂದ ಬರಿದೇ ನೋಡುತ್ತಿದ್ದಾರೆ.

( ಮೋಡ ಕಾಣುತ್ತಿಲ್ಲ, ಕತ್ತಲೋಳಗಿಂದ ಮಳೆ ಬೀಳುತ್ತಿದೆ )

ಮೈ ಸುಟ್ಟುಕೊಂಡು, ಕೈ ಮುರುಟಿಕೊಂಡು
ಮಲಗಿದ್ದಾನೆ, ಹಾದುಹೋಗುತ್ತಿರುವ ಕಾಲುಗಳನ್ನು ಎಣಿಸುತ್ತ...
ಮಳೆಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜನ
ಚಿಲ್ಲರೆ ಎಸೆಯುವುದನ್ನು ಮರೆತಿದ್ದಾರೆ.
ಹುಡುಗಿಯೊಬ್ಬಳು ಗೆಳೆಯನ ಕೈಯನ್ನು ಗಟ್ಟಿಯಾಗಿ
ಹಿಡಿದು ನಡೆಯುತ್ತಿದ್ದಾಳೆ....... ಚಳಿ ಕೆಲಸ ಮಾಡುತ್ತಿದೆ.
ಇನ್ನು ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಬೇರೆ ಬೇರೆ
ಬಸ್ಸಿನಲ್ಲಿರುತ್ತಾರೆ.
'ಸೀಟ್ ಸಿಕ್ತಾ?' ಎಂದು ಇವನು ಮೆಸೇಜ್ ಕಳಿಸಿರುತ್ತಾನೆ.

"ಬರೀ ಎಪ್ಪತ್.. ಬರೀ ಎಪ್ಪತ್", " ಹತ್ರುಪಾಯ್ಗೆ ಮೂರ್"
ಕೂಗುತ್ತಿದ್ದಾರೆ..... ಕೂಗುವುದಷ್ಟೇ ತಮ್ಮ ಕೆಲಸವೆಂಬಂತೆ.
ಅಲ್ಲೋಬಳು ಕೂಗದೆ ವ್ಯಾಪಾರ ಮುಗಿಸಿದ್ದಾಳೆ.
ಕಲರ್ ಕಲರ್ ಕನ್ನಡಕ, ತನ್ನ ಬಾಲ ಮೂಸುತ್ತ ತಿರುಗುವ ಆಟಿಕೆ ರೈಲು
ಸಾಕ್ಸು, ಕರ್ಚೀಪು, ದೇಹ, ಹಸಿವು...... ಎಲ್ಲವೂ ಮಾರಾಟವಾಗುತ್ತಿದೆ.

ಬುಸುಗುಡುತ್ತ ಬಸ್ಸೊಂದು ಧಾವಿಸುತ್ತಿದೆ,
ಪ್ಲಾಟ್ ಫಾರ್ಮ್ನಲ್ಲಿ ವಿದ್ಯುತ್ ಸಂಚಾರ.....
ಆಳದಲ್ಲೆಲ್ಲೋ ಕಳೆದುಹೊಗಿದ್ದವರಿಗೆ ಈಗ ಚಲನೆ ಬಂದಿದೆ
ಜೀವದ ಹಂಗು ತೊರೆದು ಬಸ್ಸಿಗೆದುರಾಗಿ ಓಡುತ್ತಿದ್ದಾರೆ...
"ನಾಳೆಯನ್ನು ಕಂಡವರ್ಯಾರು, ಈಗ ಸೀಟು ಸಿಕ್ಕರೆ ಅಷ್ಟೇ ಸಾಕು".

ಹತ್ತಿಸಿಕೊಂಡು ಹೋದ ಬಸ್ಸಿನ ಹಿಂದೆಯೇ
ಮತ್ತೊಂದು ಬಂದು ಇಳಿಸಿ ನಿಂತಿದೆ.
ಒಡಲು ತುಂಬಿದೊಡನೆ ಮತ್ತೆ ಓಟ ಶುರು.....
ಇಲ್ಯಾರು ತಂಗುವುದಿಲ್ಲ,
ಮೆಜಸ್ಟಿಕ್ ಮಲಗುವುದಿಲ್ಲ.


6 comments:

Anonymous said...

ಚೆನ್ನಾಗಿದೇರೀ ಭರತ್. ಅಲ್ಲೊಬ್ಬಳು ಕೂಗದೆ ವ್ಯಾಪಾರ ಮುಗಿಸಿದ್ದಾಳೆ ಅರ್ಥಗರ್ಭಿತವಾಗಿದೆ :(

Vasanth Kaje

Anonymous said...

Nice though.. :)

VJ here..

Harsha said...

Nice one maga :)

ಅನಂತ said...

ಭರತ್,
tooo good.. ತುಂಬಾ ಚೆಂದನೆಯ ಸಾಲುಗಳು.. ಇಷ್ಟ ಆಯ್ತು.. :)

kiran kodsara said...

ಇಷ್ಟ ಆಗಿದೆ ಅಂತ ಹೇಳದೆ ಇರಕ್ಕೆ ಆಗ್ತಿಲ್ಲ ಕಂಡ್ರಿ.....

Unknown said...

ಇಲ್ಯಾರೂ ತಂಗುವುದಿಲ್ಲ, ಮೆಜೆಸ್ಟಿಕ್ ಮಲಗುವುದಿಲ್ಲ. ಚೆನ್ನಾಗಿದೆ, ಒಳ್ಳೇದಾಗ್ಲಿ

Post a Comment